ಅದೊಂದು ಊರಾಚೆ ಇರೋ ಸ್ಮಶಾನ. ನಿರ್ಜನ ಪ್ರದೇಶದಲ್ಲಿ ಇದ್ದುದರಿಂದಲೋ ಏನೋ ಅದರ ಬಳಿ ಯಾರೂ ಸುಳಿದಾಡುತ್ತಿರಲಿಲ್ಲ. ಅದರ ಬಗ್ಗೆ ಇದ್ದ ಕಟ್ಟುಕತೆಗಳೂ ಏನೂ ಕಮ್ಮಿ ಇರಲಿಲ್ಲ. ಅಮಾವಾಸ್ಯೆಯ ರಾತ್ರಿ ಅದರ ಬಳಿ ಹಾದುಹೋದವರು ಒಂದು ವಾರದೊಳಗೆ ರಕ್ತ ಕಾರಿಕೊಂಡು ಸಾಯ್ತಾರಂತೆ, ಅಲ್ಲಿನ ಹುಣಸೆಮರಗಳಲ್ಲಿ ಹುಣಸೆಹಣ್ಣು ಬಿಡೋದು ನಿಂತು ವರ್ಷಗಳೇ ಆಗಿದೆಯಂತೆ ಹೀಗೆ...ಅದು ನಿಜವೋ ಸುಳ್ಳೋ ಅಂತ ಪರೀಕ್ಷಿಸೋ ಧೈರ್ಯ ಯಾರಿಗಿದ್ದೀತು? ಪಾಪ ಆ ಸ್ಮಶಾನಕ್ಕಾದರೂ ಅಷ್ಟೇ, ಆ ಊರಲ್ಲಿ ಸತ್ತವರನ್ನು ಹೂಳಲು ತಂದಾಗ ಮಾತ್ರ ಜನರ ದರ್ಶನದ ಭಾಗ್ಯ!
ಅವನು ಹುಟ್ಟಾ ಹುಂಬ. "ನಿನ್ ಕೈಲಿ ಆಗಲ್ಲ ಬಿಡು" ಅಂತ ಅವನ ಗೆಳೆಯರು ಹೇಳಿದ್ದಕ್ಕೋ ಏನೋ ಅವನ ತಲೆಯಲ್ಲಿ ಆ ಆಲೋಚನೆ ಹೊಕ್ಕಿಬಿಟ್ಟಿತ್ತು. ಚಿಕ್ಕ ವಯಸ್ಸು ಬೇರೆ, ಬಿಸಿ ರಕ್ತ. ಏನಾದರಾಗಲೀ ನೋಡೇಬಿಡೋಣ ಅಂತ ನಿರ್ಧರಿಸಿ ಆ ರಾತ್ರಿ ಒಬ್ಬನೇ ಸ್ಮಶಾನಕ್ಕೆ ಹೋಗುವುದೆಂದು ನಿರ್ಧರಿಸಿಬಿಟ್ಟಿದ್ದ. ಆಸೆಗಿಂತ ಭಯ ದೊಡ್ಡದು, ಅದಕ್ಕಿಂತ ದೊಡ್ಡದು ಕೆಟ್ಟ ಕುತೂಹಲ. ನೆತ್ತಿಯ ಮೇಲಿನ ಸೂರ್ಯನನ್ನು ನೋಡಿ, ಇವನು ಮುಳುಗಲು ಇನ್ನೂ ಎಷ್ಟು ಹೊತ್ತು ಅಂತ ಚಡಪಡಿಸತೊಡಗಿದ.
ಮಧ್ಯರಾತ್ರಿಯ ಸಮಯ. ಯಾರಿಗೂ ಸುಳಿವು ಕೊಡದೆ ಸ್ಮಶಾನದೆಡೆಗೆ ಹೊರಟವನ ಎದೆಯಲ್ಲಿದ್ದಿದ್ದು ಬರೀ ಹುಮ್ಮಸ್ಸು. ಕೊಂಚವೂ ಭಯವಿಲ್ಲದ ಈ ಸ್ಥಿತಿ ಅಸಹಜವಾ ಅಂತ ತನಗೆ ತಾನೇ ಕೇಳಿಕೊಂಡ. ಭಯ ಹುಟ್ಟಿಸೋ ತಾಕತ್ತಿರುವುದು ಭ್ರಮೆಗೆ ಮಾತ್ರ. ಆಗ ಮಾತ್ರ ತಂಗಾಳಿಯ ಸುಂಯ್ ಗುಡುವಿಕೆಯಲ್ಲಿ ಪ್ರೇತಗೀತೆ ಕೇಳಿಸಲು ಸಾಧ್ಯ. ಮಂಜಿನ ಮಬ್ಬಿನಲ್ಲಿ ಮೋಹಿನಿಯ ರೂಪ ಕಾಣಬಹುದು ಅಂದುಕೊಂಡ. ತಾನು ಬೇರೆ ಯಾವುದೋ ಕಾರಣದಿಂದ ಇನ್ನೊಂದು ವಾರದಲ್ಲಿ ಸತ್ತು ಹೋದರೆ ಊರವರ ಕಟ್ಟುಕತೆಗೆ ಹೊಸ ಅಧ್ಯಾಯ ಸಿಕ್ಕಂತಾಗುತ್ತದೆ ಅನಿಸಿ ನಕ್ಕ.
ತಕ್ಷಣವೇ ಯಾರು ಸರಿದಂತಾಯಿತು. ಬೆನ್ನ ಹುರಿಯಲ್ಲಿ ಸಣ್ಣ ನಡುಕ. ದೆವ್ವಭೂತಗಳ ಕಥೆಗಳಿಂದ ಹುಟ್ಟಿದ ಭಯವಲ್ಲ ಅದು, ಅದಕ್ಕಿಂತ ಆಳವಾದೆದ್ದೆನೋ ಅನಿಸತೊಡಗಿತು. ಮನಸ್ಸು ಬೇಡವೆನ್ನುತಿದ್ದರೂ ಕಾಲುಗಳು ಆ ಆಕೃತಿ ನಡೆದ ಕಡೆ ಹೊರಟುಬಿಟ್ಟಿದ್ದವು. ಏದುಸಿರು ಬಿಡುತ್ತಾ ಹಿಂಬಾಲಿಸಿದ ಅವನು ಆ ಆಕೃತಿಯನ್ನು ನೋಡಿ ಬೆಚ್ಚಿಬಿದ್ದ.
ಅವನ ಎದುರು ಒಬ್ಬ ಮನುಷ್ಯ ನಿಂತಿದ್ದ!
ಒ೦ದಾನೊ೦ದು ಕಾಲದಲ್ಲಿ ನಾನೊ೦ದು ಹೊರರ್ ಸ್ಟೋರಿ ಬರೆದಿದ್ದೆ :)
http://pramodc.wordpress.com/2009/08/11/%E0%B2%85%E0%B2%A6%E0%B3%8A%E0%B3%A6%E0%B2%A6%E0%B3%81-%E0%B2%AD%E0%B2%AF%E0%B3%A6%E0%B2%95%E0%B2%B0-%E0%B2%B0%E0%B2%BE%E0%B2%A4%E0%B3%8D%E0%B2%B0%E0%B2%BF/