I finished reading the delightful "Anartha Kosha" by Na Kasturi. Its a 'one of its kind' book in Kannada. Though it seems to resemble Ambrose Bierce's "Devil's Dictionary", Kasturi adds more flavors to the book - by making puns with existing words, coining new words sounding like existing words, merging two Kannada words to form a new word, merging Kannada word with an English word, twisting the proverbs etc. - to hilarious effect. Go read the full book, till then here is the list of my favorite ones from the book:
ಅಕಟಕಟಾ - ನಾವು ಹೀಗೆ ರೋಧಿಸುತ್ತಿದ್ದಾಗ ತಮಿಳರು ಅಯ್ಯೋ ಅನ್ನುತ್ತಿದರು.
ಅಚ್ಚಾತುರ್ಯ - ಅಚ್ಚು ಮಾಡುವಾಗಿನ ಚಾತುರ್ಯ, ಬರಹಗಾರರು ಮಾಡುವ ತಪ್ಪುಗಳನ್ನು ಸರಿಪಡಿಸುವ ಜಾಣತನ; ಮೊಳೆ ಜೋಡಿಸುವುದರಿಂದ ಹೊಸ ಭಾಷಾ ಪ್ರಯೋಗಗಳನ್ನು ರಚಿಸುವ ಚಮತ್ಕಾರ.
ಅಣುಕಂಪ - ಒಂದು ಊರಲ್ಲಿ ಅಣು ಬಾಂಬು ಸಿಡಿದಾಗ ನೆರೆಯೂರುಗಳಲ್ಲಾಗುವ ಸಂತಾಪ.
ಅತಿಯಾಸೆ - ನಮಗಿಂತ ಹೆಚ್ಚು ಲಾಭ ಗಳಿಸಲು ಪ್ರಯತ್ನಪಡುವವರ ದುರ್ಗುಣ.
ಅತ್ತೆ - ಈಕೆಗೆ ಮೀಸೆ ಬಂದರೆ, ಚಿಕ್ಕಪ್ಪ ಎಂದು ಕರೆಯಬಹುದು - ಮರೆಯಲ್ಲಿ.
ಅನುಕಾರಣ - ಒಂದು ಕಾರಿನ ಹಿಂದೆ ಮತ್ತೊಂದು ಕಾರು ಹೋಗುವಿಕೆ.
ಅಪ್ಪರ್ಕ್ರಿಯೆ - ಮೇಲುಲೋಕವನ್ನು ಸಾಧಿಸಲು ಮಾಡಬೇಕಾದ ಕ್ರಿಯೆ.
ಅಶ್ವಶಕ್ತಿ - ಎರಡೂವರೆ ಸೇರು ಹುರಳಿ.
ಅಸಹ್ಯಾದ್ರಿ - ಕಸಡಗುಡ್ಡೆ. ಏರಲು ತ್ರಾಸ ಕೊಡುವ ಬೆಟ್ಟ.
ಆ - ಹಲ್ಲು ವೈದ್ಯರ ಬೀಜಾಮಂತ್ರ.
ಆಟಿಗೆ - ವಿರಾಮ ಸಿಕ್ಕಿದಾಗ, ನಾವು ಆಡುವುದಕ್ಕಾಗಿ, ಮಕ್ಕಳ ಹೆಸರು ಹೇಳಿ, ನಾವು ಕೊಂಡು ತಂದು ಇರಿಸಿರುವ ಆಟದ ಸಾಮಾನುಗಳು.
ಆತ್ಮಘೋಷ - ಕಾಕ ಕಾಕ ಎಂದು ತನ್ನ ಹೆಸರನ್ನೇ ಹೇಳಿಕೊಂಡು ತಿರುಗುವ ಕಾಗೆ.
ಆನೆ ಹಾಲು - ಇದನ್ನು ಸೇವಿಸಿದರೆ ವಾರಕ್ಕೊಮ್ಮೆ ಮೈಯಭಾರ ಇಪ್ಪತ್ತು ಪೌಂಡಿನಂತೆ ಹೆಚ್ಚುತ್ತ ಹೋಗುವುದಂತೆ...ಆನೆ ಮರಿಗೆ.
ಆರಾಮ - ಆ ರಾಮನಿಗೆ ಇದು ದುರ್ಲಭವಾಗಿತ್ತಾದರೂ ನಮಗೆ ಇದು ಈಗಲೂ ಎಂದಿಗೂ ಬೇಕು.
ಆರ್ಯಪುತ್ರ - ಸೀತೆ, ಸಾವಿತ್ರಿ ಮುಂತಾದ ಪತಿವ್ರತೆಯರು ಗಂಡನನ್ನು 'ಮಾವನ ಮಗನೆ' ಎಂದು ಕೂಗುತ್ತಿದ್ದರಂತೆ.
ಆಸಾಮಿ - ಅಸಾಮ್ ರಾಜ್ಯದ ನಿವಾಸಿಗಳೂ ಒಂದು ಬಗೆಯ ಆಸಾಮಿಗಳೇ.
ಇಗ್ನೇಶ್ವರ - ತನ್ನ ಹೆಸರಿನ ಉಚ್ಚಾರಣೆಗೆ ಒದಗುವ ವಿಘ್ನಗಳನ್ನು ನಿವಾರಿಸಲಾಗದ ಒಂದು ದೇವತೆ.
ಇತ್ಯಾದಿ - ಮುಂದಕ್ಕೆ ಬರೆಯಲು ಬುಧ್ಧಿ ಓಡದಿದ್ದರೆ, ಈ ಪದವನ್ನುಪಯೋಗಿಸಿ ಬಚಾವಾಗಬಹುದು.
ಇದು - ಭಾಷನಕಾರರ ಆಸರೆ; ಇದು ಮಾಡಲು ಇದೇ ಇಲ್ಲದೇ ಹೋದರೆ, ಅವರು ಇದು ಇದು ಎಂದು ಬಹಳ ಇದು ಇದಾಗಿ ಮಾಡಬಹುದಾಗಿದೆ.
ಇಷ್ಟಾವಕ್ರ - ಮನಬಂದಂತೆ ಮೈಯ್ಯನ್ನು ಬಗ್ಗಿಸಬಲ್ಲ ನೃತ್ಯಕುಶಲಿ, ಸರ್ಕಸ್ ತರುಣ.
ಇವತ್ತು - ನಾಳೆ ಏನಪ್ಪಾ ಗತಿ ಎಂದು ನೆನ್ನೆ ಪೇಚಾಡಿದ್ದೆವಲ್ಲಾ, ಆ ನಾಳೆ.
ಇಂದುಮತಿ - ಇವತ್ತಿನ ಬುಧ್ಧಿಯ ಮಟ್ಟ.
ಈಚಮನ - ಈಚಲಮರದಡಿಯಲ್ಲಿ ಕುಳಿತು ಕುಡಿಯುವುದು.
ಈಜಾನುಬಾಹು - ಈಜುವುದಕ್ಕನುಕೂಲವಾಗುವಷ್ಟು, ಉದ್ದವಾದ ಬಾಹುಗಳನ್ನುಳ್ಳವನು.
ಉತ್ತರಕ್ರಿಯೆ - ಪರೀಕ್ಷೆಗಳಲ್ಲಿ ಉತ್ತರ ಬರೆಯುವ ಕೆಲಸ.
ಉತ್ತರಾಯಣ - ಪರೀಕ್ಷೆಯ ಋತು, ಮಾರ್ಚಿ ತಿಂಗಳಿಂದ ಜೂನ್ ವರೆಗೆ.
ಉದರ - ಉದರನಿಮಿತ್ತಮ್ ಬಹುಕೃತ ರೇಷನ್.
ಊರ್ವಶೀ - ಊರನ್ನು ವಶೀಕರಿಸುವವಳು.
ಊಳಿಡುವುದು - ರಾತ್ರಿ ಹೊತ್ತು ನಾಯಿ ಊಳಿಟ್ಟರೆ, ಸಾವಿನ ಸೂಚನೆ ಅನ್ನುತ್ತಾರೆ. ಏಕೆಂದರೆ, ಆ ನಾಯಿಯನ್ನು ಎದುರು ಮನೆಯವರು ಕಲ್ಲು ಹೊಡೆದು ಸಾಯಿಸುವ ಸಂಭವ ಇದೆ.
ಋಷೀಕೇಶ - ದಾಡಿ.
ಎಳೆನೀರು - ಎಳೆ ವಯಸ್ಸಿನಲ್ಲಿ ತೆಂಗಿನ ಸಸಿಗೆ ನಾವು ಎರೆದ ನೀರು.
ಐಲು - ಬ್ರಿಟಿಷ್ ಐಲುಗಳು ಎಂಬುದನ್ನು ಗಮನಿಸಿ.
ಒಣಮಾಲಿ - ಒಣಗಿದ ಮಾಲೆಯನ್ನು ಧರಿಸುವವ, ಭಾಷಣ ಕೊಡಲು ಹೊತ್ತು ಮೀರಿ ಬಂದವ.
ಅಂದ್ರೆ - ಆಕೆ ಅಂದ್ರೆ ಅಂದ್ರೆ ಈತನಿಗೆ ಇಂದ್ರಲೋಕ (ಗಾದೆ)
ಕನವರಸೇಷನ್ - ಇಂಗ್ಲೀಷಿನಲ್ಲೂ ಇದೇ ಮಾತಿದೆ.
ಕರಡಿ - ಶಿವಪೂಜೆಯನ್ನು ಕೆಡಿಸಲು ಶಿವದ್ವೇಷಿಗಳು ಒಳನೂಕುವ ಪ್ರಾಣಿ.
ಕಲಿಯುಗ - ವಿದ್ಯಾರ್ಥಿ ದೆಸೆ, ಕಲಿಯುವ ಕಾಲ.
ಕಲೋಪವಾಸಕ - ಕಾಲಾಜೀವನಕ್ಕೆ ಬಿದ್ದು ಉಪವಾಸ ಅನುಭವಿಸುತ್ತಿರುವ ನತದೃಷ್ಟ.
ಕವರು - ಬಿಲ್ಲುಗಳನ್ನಿರಿಸುವ ಬತ್ತಳಿಕೆ.
ಕಾಪ್ಯಾಯಮಾನ - ಕಾಪಿ ಕುಡಿದ ಮೇಲೆ ಉಂಟಾಗುವ ಅಪ್ಯಾಯಮಾನ ಪರಿಸ್ಥಿತಿ.
ಕಾಮಗಾರಿ - ವಿಟಲೀಲೆ.
ಕಾಳಿದಾಸ - ಇವತ್ತು ಈತ ಬದುಕಿದ್ದರೆ, ಈತನ ಖ್ಯಾತಿ ಜಗತ್ತೆಲ್ಲ ವ್ಯಾಪಿಸುವುದು; ಏಕೆಂದರೆ, ಈತನಿಗೆ ಸುಮಾರು ಸಾವಿರದೈನೂರು ವರ್ಷ ವಯಸ್ಸಾಗಿರುತ್ತಿತ್ತು.
ಕಿಕ್ಕಿರಿದು - ಒದ್ದು...ಬೀಳಿಸಿ...ಅನಂತರ...ಇರಿದು.
ಕಿವುಡ - ವಾಕ್ಚಿತ್ರಗಳನ್ನು ಮೂಕಚಿತ್ರಗಳಂತೆ ನೋಡುವ ಪುಣ್ಯವಂತ.
ಕಿಂಸ್ತ್ರೀ - ಕಿಂಪುರುಷನ ಮಡದಿ.
ಕೀಳುನೋಟ - ಯಾರಿಂದ ಏನನ್ನು ಕಿತ್ತುಕೊಳ್ಳೋಣ ಎಂದು ಹುಡುಕುವ ಕಣ್ಣು.
ಕುಗ್ರಾಮ - ಎರಡು ಮೈಲಿ ಸುತ್ತ ಯಾವ ಸಿನಿಮಾ ಮಂದಿರವೂ ಇಲ್ಲದ ಹಳ್ಳಿ.
ಕುದುರೆ - ಇದನ್ನು ಬರೆಯುವಾಗ ಎರಡು ಕೊಂಬುಗಳನ್ನು ಸೇರಿಸಲೇಬೇಕು.
ಕೆಸರು - ಹೆಸರು ಕೆಡಿಸಲು ಉಪಯೋಗವಾಗುವ ಪದಾರ್ಥ.
ಕೊಂಡಾಡು - ಕೊಂಡ ಮೇಲೆ ದೂಷಿಸು.
ಕೌಮಾರ - ಹಸುವನ್ನು ಕೊಲ್ಲುವವ.
ಖುದಾಸೀನ - ದೇವರಿದ್ದಾನೆ ಎಂದು ಉದಾಸೀನವಾಗಿ ಕುಳಿತಿರುವುದು.
ಗಜಗಮನೆ - ಒಂದೊಂದು ಹೆಜ್ಜೆಗೂ ಒಂದೊಂದು ಗಜ ದೂರ ಹೆಜ್ಜೆ ಇಡುವ ಹೆಂಗಸು.
ಗಜದ್ಗುರು - ಆನೆ, ಒಂಟೆ ಇತ್ಯಾದಿ ಪ್ರಾಣಿಗಳನ್ನು ಪಡೆದು ಮೆರೆಯುವವ.
ಗಂಡಾಂತರ - ವಿವಾಹವಿಚ್ಛೇದನ, ಹೆಂಗಸಿನ ದೃಷ್ಟಿಯಿಂದ.
ಗಲ್ಲಿ - ಕ್ರಿಕೆಟ್ ಆಟಗಾರರಲ್ಲಿ ಹಲವಾರು ಓಡಾಡುವ ಜಾಗ.
ಗುಡಿಸಲು - ಗುಡಿಸಲು ಜಾಗವಿಲ್ಲದ ಸ್ಥಳ.
ಗೃಹಸ್ಪತಿ - ಜಾಣತನದಿಂದ ಗೃಹಸ್ಥ ಜೀವನವನ್ನು ನಡೆಸುವವ.
ಚತುರಾನನ - ಮುಖ ನೋಡಿದರೆ ಈತ ಜಾಣ ಎಂಬ ತಪ್ಪು ಭಾವನೆಯನ್ನುಂಟು ಮಾಡುವವ.
ಚರಣಾಗತ - ಕಾಲಿಗೆ ಬಿದ್ದವ.
ಚಾಳೀಸ್ - ತಿಂಗಳಿಗೆ ನಲವತ್ತು ರೂಪಾಯಿಗೆ ಮೇಲ್ಪಟ್ಟು ಸಂಬಳ ಬರುವವರಿಗೆಲ್ಲಾ ತಗಲುವ ಒಂದು ತೆರನ ದೃಷ್ಟಿಮಾಂದ್ಯ; ಹಿರಿಯಕ್ಕನ ಚಾಳೀಸ ಮನೆಮಂದಿಗೆಲ್ಲ.
ಚಿತ್ರಹಿಂಸೆ - ಸಿನಿಮಾ ನೋಡುವವರಿಗಾಗುವ ಹಿಂಸೆ.
ಚಿರಋಣಿ - ಸಾಲವನ್ನು ಕೊಟ್ಟು ತೀರಿಸದವನು.
ಚೀರುವುದು - ಚೀರ್ಸ್ ಕೂಗುವುದು.
ಜುಟ್ಠಾಳ - ಕ್ರಾಪ್ ಮಾಡಿಸಿಕೊಂಡಿರುವವ.
ತಟಸ್ಥ - ನದೀಸ್ನಾನಕ್ಕೆ ಬಂದು ನೀರಿಗೆ ಇಳಿಯಲೋ ಬೇಡವೋ ಎಂದು ಅನುಮಾನಿಸುವವ.
ತಾಳಿ - ತಾಳಿ ಕಟ್ಟಬೇಕೋ, ಬೇಡವೋ, ಎಂಬ ನಮ್ಮ ಪ್ರಶ್ನೆಗೆ, ನಮ್ಮ ಉತ್ತರವೂ ಇದೇ, ತಾಳಿ.
ಥತ್ವ - ಅಸಹ್ಯತನ.
ದಡ್ಡರು - ಗಂಡಸರ ಸರಿಸಮಾನ ನಾವು ಎಂದು ತಮ್ಮ ಹಿರಿಮೆಯನ್ನು ತಗ್ಗಿಸಿ ವಾದಿಸುವ ಹೆಂಗಸರು.
ದಂಡಪ್ರಾಣಾಮ - ಅನುಗ್ರಹ ಲಭಿಸದೆ ಮಾಡಿದ ನಮಸ್ಕಾರ.
ದನಧಾನ್ಯ - ತವುಡು.
ದಂಪತಿ - ದಮ್ಮಿರುವ ಪತಿ; ಸಿಂಪತಿಗೆ ಕಾರಣರು.
ದಾವಾಗ್ನಿ - ಕೋರ್ಟು ಕಛೇರಿಗಳಲ್ಲಿ ಓಡಾಡುವಾಗ ತಟ್ಟುವ ಬಿಸಿ.
ದುರುಗುಟ್ಟು - ಏಕೆ ದುರುದುರನೆ ನೋಡುತ್ತಿದಾನೆ ಎಂಬುದೇ ಗುಟ್ಟು.
ಧೀರ - ಧೈರ್ಯವಿಲ್ಲ ಎಂದು ಒಪ್ಪಿಕೊಳ್ಳಲು ಧೈರ್ಯವಿಲ್ಲದವ.
ನಾರಿ - ನಾರಿ ಮುನಿದರೆ ಮಾರಿ ಎನ್ನುತ್ತೇವೆ; ಆದರೆ ಕೊಂಡುಕೊಳ್ಳೋರು ಯಾರು?
ನಾಶೀರ್ವಾದ - ಶಾಪ.
ನ್ಯೂಪುರ - ನಗರದ ಹೊಸ ಬಡಾವಣೆ.
ಪಕ್ಕಸಾಲಿಗ - ಪಕ್ಕದಲ್ಲೇ ಮನೆಮಾಡಿಕೊಂಡು, ಸದಾ ಸಾಲ ಕೇಳುವವ.
ಪತಿ - ದಂಪತಿಗಳಲ್ಲಿ ದ೦ ಕಳೆದುಕೊಂಡವನು.
ಪತಿಬಿಂಬ - ಗಂಡನ ಫೋಟೊ.
ಪರಶುರಾಮಕ್ಷೇತ್ರ - ಇಲ್ಲಿ ಜನ ಸದಾ 'ಕೊಡಲಿ', 'ಕೊಡಲಿ' ಎಂದು ಕೂಗುತ್ತಿರುತ್ತಾರೆ.
ಪಿತೃಪಕ್ಷ - ಗಂಡಹೆಂಡಿರ ಜಗಳದಲ್ಲಿ ತಂದೆಯ ಪಕ್ಷ ವಹಿಸುವ ಮಗು.
ಪುಸ್ತಕ - ಮನುಷ್ಯನ ಜ್ಞಾಪಕಶಕ್ತಿಯನ್ನು ಕುಗ್ಗಿಸಲು ನಮ್ಮ ಹಿರಿಯರು ಕಂಡುಹಿಡಿದಿರುವ ಉಪಾಯ.
ಪೂರ್ವಶಿ - ಬಡತನಕ್ಕೆ ಬಿದ್ದ ಬೆಲೆವೆಣ್ಣು.
ಬಂದರು - ಸಮುದ್ರದ ಮೇಲೆ ಹೋಗಿದ್ದವರು ಬಂದರು ಎನ್ನಿಸುವ ಜಾಗ.
ಬಂಧು - ಬಂದುಂಡು ಹೋಗದವ.
ಬಿಲೋತ್ತಮೆ - ಹೆಗ್ಗಣ ಸ್ತ್ರೀ.
ಬೂತಚೇಷ್ಟೆ - ಪೋಲಿಂಗ್ ಬೂತ್ ಸುತ್ತ ಹುರಿಯಾಳುಗಳು ಮಾಡುವ ಚೇಷ್ಟೆ.
ಬೇತಾಳ - ರಾಗಜ್ಞಾನವಿದ್ದರೂ ಕೆಲವು ಸಂಗೀತಗಾರರಿಗೆ ತಾಳಜ್ಞಾನವೇ ಇರುವುದಿಲ್ಲ.
ಬೋನಸ್ - ಹಿಡಿದ ಸಂಬಳವನ್ನು ಹಿಂದಕ್ಕೆ ಕೊಡುವ ನೀತಿ.
ಭಸಾಕಂಪ - ಸಭಾಕಂಪಾದಿಂದ ಹೀಗಾಗುವುದುಂಟು.
ಭಾವಜೀವಿ - ಅಕ್ಕನ ಮನೆಯಲ್ಲಿದ್ದು ಕಾಲೇಜು ವ್ಯಾಸಂಗ ನಡೆಸುವ ಹುಡುಗ.
ಮಂತ್ರಿ - ನಾವು ಇನ್ನೂ ಚನ್ನಾಗಿ ಮಾಡಬಲ್ಲ ಕೆಲಸ ಕಾರ್ಯಗಳನ್ನು, ನಮಗಿಂತ ಅಸಮರ್ಪಕವಾಗಿ ಮಾಡಲು, ನಾವು ಚುನಾಯಿಸುವ ವ್ಯಕ್ತಿ.
ಮದ್ಯಪಾನಿ - ನೀರು ಬೆರೆಸಿದ ಹೆಂಡ.
ಮರ್ದನಾರೀಶ್ವರ - ಸತಿಯ ಮೇಲೆ ಕೈಮಾಡುವ ಪತಿ.
ಮನಸ್ಕರಿಸು - ಮನಸಾ ನಮಸ್ಕರಿಸು.
ಮನಸ್ಸಾಕ್ಷಿ - ಮಾಡದ ತಪ್ಪನ್ನು ಮಾಡಬೇಕಾಗಿತ್ತು ಎಂದೆನಿಸುವ ಒಳಮನಸ್ಸು.
ಮಹಾರಾಯ - ಮಾಡಿಬಡಿಸಿದ್ದನ್ನು, ಮರುಮಾತಿಲ್ಲದೆ ಉಣ್ಣುವವ.
ಮಹಾತ್ಮರು - ಮಹಾತ್ಮರು ಯಾವ ದೇಶದಲ್ಲೂ ಇದುವರೆಗೂ ಹುಟ್ಟಿಲ್ಲ; ಹುಟ್ಟುವುದೆಲ್ಲಾ ಶಿಶುಗಳೇ.
ಮಳೆ - ಅತೀ ಎತ್ತರದ ಜಲಪಾತ.
ಮೀನ ಮೇಷ - ಮೀನು ತಿನ್ನಲೋ, ಮೇಷ ತಿನ್ನಲೋ, ಎಂಬ ಚರ್ಚೆ.
ಮುದ್ರಾಕ್ಷಾಸರ - ಮುದ್ರಾರಾಕ್ಷಸನ ಪ್ರಭಾವದಿಂದ ಅವನ ಹೆಸರನ್ನು ಮುದ್ರಿಸಹೊರಟಾಗಲೂ ಹೀಗೆ ಬೀಳುತ್ತದೆ.
ಮೂರ್ಖ - ನಮ್ಮ ಅಭಿಪ್ರಾಯಗಳನ್ನು ತಪ್ಪೆಂದು ವಾದಿಸುವವ.
ಮೃತ್ಯು - ಮೃತ್ಯುಂಜಯ ಎಂದು ಹೆಸರಿಟ್ಟು, ಆ ಮಗುವನ್ನು ಮುದ್ದಾಗಿ ಕರೆಯುವ ರೀತಿ.
ಮೆಡಲು - ಇದನ್ನು ಮತ್ತೊಬ್ಬರ ಎದೆಗೆ ಚುಚ್ಚಿದಾಗ, ನಮ್ಮ ಎದೆ ಚುರ್ರೆನ್ನುತ್ತದೆ.
ಮೈಥುನಾಲಜಿ - 'ಮೈಥಾಲಜಿ'ಯಲ್ಲಿ ಇದೇ ಮುಖ್ಯ.
ರ - ಆಸು ನೀಗಿದ ಅಸುರ.
ರಜದಮಹೋತ್ಸವ - ಶಾಲಾ ಹುಡುಗರಿಗೆ.
ರಿಕ್ಷ - ಅಂತರಿಕ್ಷದ ಕೊನೆಯಲ್ಲಿ ಕಾಣುವುದು.
ರೋಗಾಸನ - ಹಾಸಿಗೆ.
ಲಂಗ - ಕಾಲಸ್ಥಿತಿಯನ್ನು ತಿಳಿಸುವ ಒಂದು ಉಪಕರಣ.
ಲಂಗಲಗಾಮು - ಹೆಣ್ಣಿನ ಹತೋಟಿ.
ಲಘುವಂಶ - ಕಳಪೆ ಕುಲ.
ಲವರವಿಕೆ - ಸಣ್ಣ ಕುಪ್ಪಸ.
ಲಾವಣ್ಯ - ಉಪ್ಪು ಹೆಚ್ಚಾಗಿರುವಿಕೆ.
ವಸಂತ - ಕವಿಗಳಿಗೆ ಹುಚ್ಚು ಬರುವ ಕಾಲ.
ವಾಕರಿಕೆ - ಕೆಲವರ ವಾಕ್ ಕೇಳುವಾಗ ಆಗುವ ಪ್ರತಿಕ್ರಿಯೆ.
ವೀರಾವೇಷ - ಸೈನಿಕನ ಸಮವಸ್ತ್ರ.
ಶನಿಕಾಟ - ನಮಗೆ ಬರುವ ಕಷ್ಟಗಳೆಲ್ಲ ನಮ್ಮ ದೋಷದಿಂದಲ್ಲ, ಎಂದು ನಾವು ಸಮಾಧಾನಪಡೆಯಲು ಇದರಲ್ಲಿ ನಂಬಿಕೆ ಇರಬೇಕು.
ಶನೀಶ್ವರ - ರಾಮೇಶ್ವರಕ್ಕೆ ಹೋದಾಗ, ಅಲ್ಲೂ ನಮ್ಮನ್ನು ಪೀಡಿಸುವ ಪೂಜಾರಿಗಳು.
ಷಾರ್ಪನಖಿ - ಚೂಪಾದ ಉಗುರು ಹೊಂದಿರುವ ಹೆಣ್ಣು.
ಷೀಯಾಳಿಸಿ - ಹೀಯಾಳಿಸಿ ಎಂಬುದರ ಸ್ತ್ರೀಲಿಂಗ.
ಸತ್ಯನಾರಾಯಣಪೂಜೆ - ಸಾವಿರ ಸುಳ್ಳು ಹೇಳಿ, ಒಂದು ಸತ್ಯನಾರಾಯಣ ಪೂಜೆ ಮಾಡು; ಆದುವರೆಗೂ ಎಣಿಸುತ್ತಾ ಹೋಗು.
ಸದ್ದು - ಸದ್ದನ್ನಡಗಿಸಲು ಜನ, ಸದ್ದು ಸದ್ದು, ಎಂದು ಸದ್ದು ಮಾಡುತ್ತಾರೆ.
ಸಮಯಸ್ಪೂರ್ತಿ - ಸ್ನಾನದ ಮನೆಯೊಳಗೆ ನುಗ್ಗಿದಾಗ, ಅಲ್ಲಿದ್ದ ಮಹಿಳೆಯನ್ನು ಕಾಣುತ್ತಲೂ, ಹೊರಕ್ಕೆ ಧಾವಿಸುತ್ತ, ಕ್ಷಮಿಸಿ ರಾಯರೆ, ಎಂದು ಹೇಳುವುದು.
ಸಲಹೆ - ಪ್ರಪಂಚದಲ್ಲಿ ಅತೀ ಅಗ್ಗದ ವಸ್ತು; ಸಲಹೆ ಕೊಡಲು ಹೋಗಬೇಡಿ. ಇದೇ ನಮ್ಮ ಸಲಹೆ.
ಸಾಲಂಕೃತ - ಕನ್ಯಾದಾನಗಳನ್ನೆಲ್ಲ ಸಾಲಂಕೃತವಾಗಿಯೇ ಮಾಡುವ ಪದ್ಧತಿ.
ಸುಸ್ತಾದ್ - ಹೇಳಿಕೊಟ್ಟು ಹೇಳಿಕೊಟ್ಟು ಸುಸ್ತಾದ ಪೈಲ್ವಾನ, ಅಥವಾ, ಗುರು.
ಸೂಟು - ಸೂಟಾಗದಿದ್ದರೂ ಅನೇಕರು ಧರಿಸಿ ಮೆರೆಯುವ ವಸ್ತ್ರ ವಿಶೇಷ.
ಸೂತ್ರ-ಧಾರ - ಎರಡೂ ಒಂದೇ.
ಸ್ವಗತ - ನಾಟಕದಲ್ಲಿ ಒಬ್ಬರನ್ನುಳಿದು ಮಿಕ್ಕೆಲ್ಲರಿಗೂ ಕೇಳಿಸುವಂತೆ ಕೂಗಬೇಕಾದ ಮಾತು.
ಸ್ವತಂತ್ರವಿಚಾರ - ಮದುವೆಯಾಗದವನ ಯೊಚನೆಗಳು.
ಸ್ವಾರ್ಥಿ - ಉಳಿದವರ ಸ್ವಾರ್ಥಕ್ಕೆ ಗಮನಕೊಡದವ.
ಹಣಹೀನ - 'ಹಣವಾನ್ ಗುಣವಾನ್ ಲೋಕೇ ಹನಹೀನೋ ಹೆಣಾಧಮಃ'
ಹತ್ತಿರ- ಹತ್ತಿರ, ಎಂದರೆ ಎಷ್ಟು ಮೈಲಿ ದೂರ, ಎಂಬುದು ಇನ್ನೂ ನಿರ್ಧಾರವಾಗಿಲ್ಲ.
ಹನುಮಾನ - ಸೀತೆಯೇ, ಮಾಂಡೋದರಿಯೇ, ಎಂಬ ಕಪಿ ಸಂದೇಹ.
ಹರಿಹರ - ಒಬ್ಬ ಕನ್ನಡ ಕವಿ, ತುಂಬಾ ರಗಳೆ ಮಾಡಿದವನು.
ಹಲ್ಲುಪುಡಿ - ಹಲ್ಲನ್ನೇ ಪುಡಿಮಾಡಿ ಮಾರುವವರು ಬಹಳ ಕಡಿಮೆ, ಜಗತ್ತಿನಲ್ಲಿ.
ಹಾರನ್ - ಹಾ! ರನ್! ಎಂದು ಕೂಗಿ ಹೇಳುವ ಒಂದು ಉಪಕರಣ.
Comments
have been na.kasturi's fan ever since i held the orange paperback!
thanks for this post, vasuki!